ಬಹಿರ್ಜನಿತ ಬಲಗಳು - 
ಭೂಮಿಯ ಮೇಲಿನ ಶಿಲೆಗಳ ಆಕಾರವನ್ನೂ ಸ್ವರೂಪವನ್ನು ಬದಲಾಗುವಂತೆ ಮಾಡುವ ಎರಡು ಬಲಗಳ ಪೈಕಿ ಒಂದು  (ಎಪಿಜೀನ್ ಏಜೆಂಟ್ಸ್). ಇನ್ನೊಂದು ಅಂತರ್ಜನಿತ ಬಲಗಳು (ಹ್ಶೆಜೊಜೀನ್ ಏಜೆಂಟ್ಸ್) ಅಂತರ್ಜನಿತ ಬಲಗಳು, ಹೆಸರೇ ತಿಳಿಸುವಂತೆ, ಭೂಮಿಯ ಒಳಭಾಗದಲ್ಲಿಯ ಬಲಗಳು. ಅಲ್ಲಿ ಸಂಚಿತವಾಗಿರುವ ಅತಿ ಉಷ್ಣದಿಂದ ಇವು ಜನಿಸಿ ಭೂಕಂಪನಗಳ ರೂಪದಲ್ಲಿ ಗೋಚರವಾಗುತ್ತವೆ. ಹೀಗಲ್ಲದೇ ಬಹಿರ್ಜನಿತ ಬಲಗಳು ಭೂಮಿಯ ಮೇಲುಭಾಗದಲ್ಲಿ ಸೂರ್ಯನ ಪ್ರಖರ ಶಾಖದ ಕಾರಣವಾಗಿ ಜನಿಸುವ ಬಲಗಳು ಇವುಗಳಲ್ಲಿ 6 ಮುಖ್ಯ ಬಗೆಗಳನ್ನು ಗುರುತಿಸಿದೆ: ಹರಿಯುವ ನೀರು, ನೆಲದ ನೀರು, ಕಡಲ ಅಲೆಗಳು, ಗಾಳಿ, ನೀರ್ಗಲ್ಲುಗಳು, ಗುರುತ್ವ ಇವು ಭೂಮಿಯ ಮೇಲಿರುವ ಶಿಲೆಗಳನ್ನು ನಿರಂತರವಾಗಿ ಕಡೆದು ಅವು ಚಿತ್ರವಿಚಿತ್ರವಾದ ರೂಪಗಳನ್ನು ಪಡೆಯುವಂತೆ ಮಾಡುತ್ತವೆ. ಹೊರಗಿನ ಪ್ರಕೃತಿಯ ರೌದ್ರತೆಗೂ ರಮಣೀಯತೆಗೂ ಬಹಿರ್ಜನಿತ ಬಲಗಳೇ ಕಾರಣ.

	ಹರಿಯುವ ನೀರು : ಬರ್ಹಿಜನಿತ ಬಲಗಳ ಪೈಕಿ ಹರಿಯುವ ನೀರಿನ ಬಲ ಅತಿ ಮುಖ್ಯವಾದುದು. ಭೂಮಿಯಲ್ಲಿ ಸಾಧಾರಣ ಎಲ್ಲ ಭಾಗಗಳ ಮೇಲೆಯೂ ಮಳೆ ಸುರಿಯುವುದರಿಂದ ಹರಿಯುವ ನೀರಿನ ಹಾವಳಿಯನ್ನು ಎಲ್ಲೆಲ್ಲೂ ಕಾಣಬಹುದು. ಅದೇ ಎತ್ತರದಿಂದ ಕೆಳಗಡೆ ದುಮುಕುವಾಗ ನೀರು ಎಂಥ ಗಡಸು ಕಲ್ಲನ್ನು ಕೂಡ ಸೀಳಿ ಬಹಳ ದೂರ ಕೊಂಡೊಯ್ಯಬಲ್ಲದು. ಗೇರುಸೊಪ್ಪೆಯ ಬಳಿ ಶರಾವತಿ ಘಟ್ಟದ ಮೇಲಿನಿಂದ 240 ಮೀ ಆಳ ಕೆಳಗೆ ದುಮುಕುತ್ತದೆ. ಈ ನೀರಿನ ಶಕ್ತಿಯ ಪರಿಣಾಮವಾಗಿ ಸುಮಾರು 30 ಕಿ ಮೀ ದೂರ ಗಡುಸಾದ ಕಲ್ಲು ಕೊರೆದು ಹೋಗಿ ಆಳವಾದ ಕಮರಿಯಾಗಿದೆ. ಕಾವೇರಿ ಶಿಂಷಾ ನದಿಗಳು ಶಿವನಸಮುದ್ರದ ಬಳಿ ದುಮುಕಿ ಶಿಲೆಗಳನ್ನು ಕೊರೆದಿವೆ. ಮೇಕೆಯ ದಾಟಿನ ಬಳಿ, ಕಿರಿದಾದ ಸಂದಿನಲ್ಲಿ ಕಾವೇರಿ ನದಿ ನುಗ್ಗುವಾಗ ಆಚೀಚಿನ ದಡಗಳನ್ನೂ ತನ್ನ ಪಾತ್ರವನ್ನೂ ಕೊರೆದು ಹಾಕಿದೆ. ಹರಿಯುವ ನೀರು ಏನೆಲ್ಲ ಕೆಲಸ ಮಾಡಬಹುದು ಎನ್ನುವುದಕ್ಕೆ ಇವು ಉತ್ತಮ ನಿದರ್ಶನಗಳು. ಮುಖ್ಯವಾಗಿ ನದೀರೂಪದಲ್ಲಿ ಹರಿಯುವ ನೀರು ಭೂಭಾಗವನ್ನು ಕಡೆದು ಕಣಿವೆಗಳನ್ನು ರೂಪಿಸುತ್ತದೆ. ಬೇಸಗೆ ದಿನಗಳಲ್ಲಿ ಸಣ್ಣ ಝರಿಯಾಗಿ ಹರಿಯುತ್ತಿರುವ ನೀರು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಹುಚ್ಚೆದ್ದು ಕುಣಿಯುತ್ತದೆ. ದಡಗಳನ್ನು ಕತ್ತರಿಸಿ ಹಾಕುತ್ತದೆ. ಕಲ್ಲುಗುಂಡುಗಳನ್ನು ಉರುಳಿಸುತ್ತದೆ. ಇವು ಉರುಳುತ್ತ ಉರುಳುತ್ತ ರುಬ್ಬುಗುಂಡಿನಂತೆ ನದಿಯ ಪಾತ್ರವನ್ನು ಕೊರೆದು ಹಾಕುತ್ತವೆ.

	ಭೂಮಿಯ ಮೇಲೆ ಬೀಳುವ ಮಳೆಯ ಮೂರರಲ್ಲಿ ಒಂದು ಭಾಗ ನೀರಾಗಿ ಹರಿದು ತನ್ನ ಶಕ್ತಿಯಿಂದ ನೆಲವನ್ನು ಕೊರೆದು ಬೆಟ್ಟ ಕಣಿವೆ, ಗಿರಿಕಂದರಗಳು ರೂಪುಗೊಳ್ಳುವುದಕ್ಕೆ ಪ್ರಧಾನ ಪ್ರೇರಕ ಶಕ್ತಿಯಾಗುತ್ತದೆ.

	ನೆಲದ ನೀರು : ಹರಿಯುವ ನೀರಿಗೆ ಹೇಗೊ ಹಾಗೆ ನೆಲದಲ್ಲಿರುವ ನೀರಿಗೂ ಮಳೆಯೇ ಅಧಾರ. ಬಿದ್ದ ಮಳೆಯಲ್ಲಿ ಕಾಲುಭಾಗ ನೆಲದೊಳಗೆ ಜಿನುಗಿ ನೆಲದ ನೀರಾಗಿ ಮಾರ್ಪಡುತ್ತದೆ. ಮೇಲುನೀರಿನಂತೆ ನೆಲದ ನೀರೂ ಮೇಲಿಂದ ಕೆಳಕ್ಕೆ ಹರಿಯಬಲ್ಲದು. ಆದರೆ ಅದರ ಗತಿ ನಿಧಾನ. ಹೀಗೆ ಅದು ನಿಧಾನವಾಗಿ ಸಾಗುವಾಗ, ಕಲ್ಲು ಮಣ್ಣಿನಲ್ಲಿರುವ ಲವಣ ಸಂಬಂಧವಾದ ಖನಿಜಗಳನ್ನು ವಿಲೀನಿಸಿಕೊಳ್ಳುತ್ತದೆ. ಶಿಲೆಗಳಲ್ಲಿ ಸಂದುಗಳನ್ನು ಕೊರೆಯುತ್ತದೆ. ಇವನ್ನು ಹಿಗ್ಗಲಿಸಿ ರಂಧ್ರಗಳನ್ನೂ ಗುಹೆಗಳನ್ನೂ ರೂಪಿಸುತ್ತದೆ. ಸುಣ್ಣಕಲ್ಲಿನಿಂದ ಒಡಗೂಡಿದ ಪ್ರದೇಶಗಳಲ್ಲಿ ಇಂಥ ಗುಹೆಗಳು ಸಾಮಾನ್ಯ. ಒಂದಕ್ಕೊಂದು ಸೇರಿಕೊಂಡಂತೆ ಬಲು ದೂರ ಈ ಗುಹೆಗಳ ಜಾಲವೇ ರೂಪುಗೊಳ್ಳುವುದುಂಟು. ಇವುಗಳಲ್ಲಿ ಸುಣ್ಣಮಯ ನೀರು ಮೇಲಿಂದ ತೊಟ್ಟಿಕ್ಕುತ್ತಿರುವುದರಿಂದ ನೆಲದ ಮೇಲೊ ಚಾವಣಿಯ ಮೇಲೊ ಬಗೆಬಗೆಯ ಆಕಾರದ ನಾನಾಬಣ್ಣದ, ವಿಚಿತ್ರಾಕಾರದ ಗೋಪುರದಂಥ ಅಕೃತಿಗಳು ರೂಪುಗೊಳ್ಳುತ್ತವೆ. ಈ ಗುಹೆಗಳನ್ನು ಒಳಹೊಕ್ಕು ನೋಡಿದರೆ ಯಾವುದೋ ದೇವಲೋಕದ ಅರಮನೆಗೆ ಹೋದಂತೆ ಭಾಸವಾಗುತ್ತದೆ.

	ಕಡಲ ಅಲೆಗಳು : ಕಡಲಿನ ಅಂಚಿನಲ್ಲಿ ಅಲೆಗಳ ಶಕ್ತಿಯನ್ನು ನೋಡಬಹುದು. ಅಲೆಯೊಂದಿಗೆ ಬಿರುಗಾಳಿಯ ರಭಸವೂ ಸೇರಿದಾಗ ಆಗುವ ಅನಾಹುತ ಹೇಳತೀರದು. ಕಡಲ ಅಂಚಿನಲ್ಲಿ ನಿಂತಿರುವ ಗಡಸು ಕಲ್ಲಿನ ಗೋಡೆಗಳು ಅಲೆಗಳ ಹಾವಳಿಗೆ ಸಿಕ್ಕಿ ನುಚ್ಚು ನೂರಾಗುತ್ತವೆ. ಚಿತ್ರ ವಿಚಿತ್ರಾಕಾರದಲ್ಲಿ ಈ ಬಂಡೆಗಳು ಕಡೆದು ನಿಂತಿರುವುದನ್ನು ನೋಡಬಹುದು. ಚಂಡಮಾರುತ ಎದ್ದಾಗ ದೊಡ್ಡ ಅಲೆಗಳು ನೆಲದ ಮೇಲೆ ಹೊರಳಿ ದಡದಲ್ಲಿರುವ ಮನೆ ಮರಗಳನ್ನೂ ಹಾದಿ ಬೀದಿಗಳನ್ನೂ ಕೊಚ್ಚಿ ಕೆಡೆಯುತ್ತವೆ.

	ಗಾಳಿ : ಸೂರ್ಯನ ಶಾಖದ ಪರಿಣಾಮವಾಗಿ ಗಾಳಿ ನಿಂತಲ್ಲಿ ನಿಲ್ಲದೆ ಅಲೆಯುತ್ತಿರುತ್ತದೆ. ಇದು ಒಮ್ಮೊಮ್ಮೆ ಬಿರುಗಾಳಿಯಾಗಿ, ಸುಂಟರಗಾಳಿಯಾಗಿ ನೆಲದ ಮೇಲೆ ಬೀಸಿ ಬಹಳ ಹಾನಿ ಉಂಟುಮಾಡುತ್ತದೆ. ಗಾಳಿಯೊಂದಿಗೆ ಮರಳ ಕಣಗಳು ಸೇರಿಕೊಳ್ಳುವುದರಿಂದ, ಇವೆರಡರ ಹಾವಳಿಗೆ ಸಿಕ್ಕಿ ಎಂಥ ಗಡುಸಾದ ಕಲ್ಲಾಗಲಿ ಗೀಚು ಬಿದ್ದು, ಕೊರೆದು ಹೋಗುತ್ತದೆ. ಬೀಳುಬಿದ್ದ ಕಲ್ಲು ಮಣ್ಣೆಲ್ಲವನ್ನೂ ಗಾಳಿ ಬಲುದೂರ ಕೊಂಡೊಯ್ಯಬಲ್ಲದು. ಹೀಗೆ ಸಾಗಿ ಬಂದ ಮರಳ ರಾಶಿ ಫಲವತ್ತಾದ ಭೂಮಿಯ ಮೇಲೆ ಹರಡಿ ಅದನು ಮರುಭೂಮಿಯಾಗಿ ಹಾಳುಗೆಡೆಯುತ್ತದೆ. ತಲಕಾಡಿನ ಬಳಿ ಕಾವೇರಿನದಿಯ ಮರಳು ಗಾಳಿಯ ದೆಸೆಯಿಂದ ಊರಮೇಲೆ ಹೊರಳಿ ದೇವಸ್ಥಾನದ ಉನ್ನತ ಗೋಪುರಗಳನ್ನು ಕೂಡ ಮುಚ್ಚಿಹಾಕಿದೆ. ಮಳೆಯಿಲ್ಲದೆ ಬೆಂಗಾಡಾದ ಪ್ರದೇಶದಲ್ಲಿ ಎದ್ದುನಿಂತಿರುವ ಕಲ್ಲು ಬಂಡೆಗಳು ಮರಳು ಮಿಶ್ರಿತ ಗಾಳಿಯಿಂದ ಚಿತ್ರ ವಿಚಿತ್ರಾಕಾರವಾಗಿ ಕೆತ್ತಿರುವುದನ್ನೂ ಕಾಣಬಹುದು.

	ಹಿಮಾನಿಗಳು : ಶೀತವಲಯದ ಬಹುಭಾಗದಲ್ಲಿ ಅಂತೆಯೇ ಎತ್ತರವಾಗಿ ನಿಂತಿರುವ ಪರ್ವತ ಪಂಕ್ತಿಯ ಮೇಲೆ ಬಿದ್ದ ಹಿಮ ಹೆಪ್ಪುಗಟ್ಟಿ ನೂರಾರು ಮೀಟರ್ ಮಂದದ ಹಿಮಗೆಡ್ಡೆಗಳಾಗಿ ಶೇಖರವಾಗುತ್ತದೆ. ಹೀಗೆ ಸೇರಿದ ಹಿಮ ಇದ್ದ ಕಡೆಯೇ ಇರುವುದಿಲ್ಲ. ತಗ್ಗಿನ ಕಡೆಗೆ ನಿಧಾನವಾಗಿ ಚಲಿಸುವುದು. ಇದೇ ಹಿಮಾನಿ. ಇದು ನಿಧಾನವಾಗಿ ಚಲಿಸಿದಂತೆ ಅಕ್ಕಪಕ್ಕದ ಕಣಿವೆಯ ಗೋಡೆಗಳನ್ನೂ ತಳಭಾಗವನ್ನೂ ಗೋರಿಹಾಕಿ ಉಜ್ಜಿ, ಪಾಲೀಷು ಮಾಡುತ್ತದೆ. ಹಿಮಾನಿಯ ದೈತ್ಯ ಮುನ್ನಡೆಯ ಮುಂದೆ ಯಾವ ತಡೆಯೂ ನಿಲ್ಲಲಾರದು. ಎಲ್ಲವೂ ನಿರ್ನಾಮವಾಗಿ ಹೋಗುತ್ತದೆ. ಹಿಮಾಲಯ ಪರ್ವತ ಪ್ರಾಂತದಲ್ಲಿ ಸೂಜಿ ಮೂತಿಯ ಶಿಖರಗಳೂ ರುದ್ರ ರಮಣೀಯ ಪ್ರಕೃತಿ ರೂಪುಗಳೂ ಚಿತ್ರವಿಚಿತ್ರಾಕಾರಗಳನ್ನು ಹೊಂದಿರುವುದಕ್ಕೆ ಹಿಮವೂ ಹಿಮಾನಿಗಳೂ ಕಾರಣ. ಹಿಮಕರಗಿದಾಗ ಹಿಮಾನಿ ಹೊತ್ತು ತಂದ ಕಲ್ಲುಮಣ್ಣೆಲ್ಲವೂ ಒಟ್ಟುಗೂಡಿ ಅದರ ಹಿಂದೆ ವಿಶಾಲವಾದ ಸರೋವರಗಳು ಹುಟ್ಟಿಕೊಳ್ಳುವುದುಂಟು. ಅಮೆರಿಕ ದೇಶದ ಸುಪ್ರಸಿದ್ಧ ಸರೋವರಗಳಾದ ಲೇಕ್ ಸುಪೀರಿಯರ್, ಮಿಚಿಗನ್, ಈರಿ. ಆಂಟೇರಿಯೊ ಸರೋವರಗಳು ಹಿಮಾನಿಗಳ ಕಾರಣವಾಗಿ ಹುಟ್ಟಿದವು. ಈ ಸರೋವರಗಳಲ್ಲಿ ಅತಿ ದೊಡ್ಡದಾದ ಸುಪೀರಿಯರ್ ಸರೋವರದ ವಿಸ್ತೀರ್ಣ ಕರ್ನಾಟಕ ರಾಜ್ಯಕ್ಕಿಂತ ದೊಡ್ಡದು. ಹಿಮನದಿಗಳು ಎಂಥ ಅಗಾಧ ಪ್ರಮಾಣದಲ್ಲಿ ಭೂಭಾಗವನ್ನು ಕೊರೆದು ಸರೋವರವನ್ನು ನಿರ್ಮಿಸಬಲ್ಲವು ಎನ್ನುವುದು ಇದರಿಂದ ತಿಳಿಯುತ್ತದೆ. ಉಷ್ಣದೇಶವಾದ ಭಾರತದಲ್ಲಿ ಇಂಥ ಸರೋವರಗಳು ಹುಟ್ಟಿಕೊಳ್ಳುವ ಅವಕಾಶವಿಲ್ಲ. ಭೂಶಿಲ್ಪ ಕಾರ್ಯದಲ್ಲಿ ಹಿಮಾನಿಗಳ ಪಾತ್ರ ಹಿರಿದಾದದ್ದು. ಅಗಾಧ ಪ್ರಮಾಣದಲ್ಲಿ ಪರ್ವತಾಕಾರದ ಬಂಡೆಗಳನ್ನೇ ಅವು ಜರಗಿಸಿ ದೂರ ಕೊಂಡೊಯ್ಯಬಲ್ಲವು.

	ಗುರುತ್ವ : ಭೂಮಿ ಎಲ್ಲವನ್ನೂ ತನ್ನ ಕೇಂದ್ರದೆಡೆಗೆ ಅಕರ್ಷಿಸುತ್ತದೆ. ಇದೇ ಗುರುತ್ವಾಕರ್ಷಣ ಬಲ. ಇದರ ಪರಿಣಾಮವಾಗಿ ಎತ್ತರದಲ್ಲಿರುವ ಎಲ್ಲ ವಸ್ತುಗಳೂ ಕೆಳಕ್ಕೆ ಉರುಳಲೇಬೇಕು. ಪರ್ವತಗಳ ಸೆರಗುಗಳು ಕೆಲವೊಮ್ಮೆ ಕದಲಿ ಬೆಟ್ಟ ಬೆಟ್ಟಗಳೇ ಜರಗಿ ಕೆಳಗುರುಳುವುದುಂಟು. ಇದರ ಕಾರಣ ಗುರುತ್ವ ಬೆಟ್ಟದ ಮೇಲಿರುವ ಕಲ್ಲು ಗುಂಡುಗಳು ಸ್ಥಳಪಲ್ಲಟವಾಗಿ ಕೆಳಗೆ ಬೀಳುತ್ತವೆ. ಈ ರೀತಿಯ ಶಿಲಾಪಾತಗಳು ಹಿಮದಿಂದ ಮುಚ್ಚಿಹೋಗಿರುವ ಹಿಮವತ್ಪ್ರದೇಶದಲ್ಲಿ ಬಹಳ ಸಾಮಾನ್ಯ. ಇಂಥ ಕಡೆ ಹಿಮ, ಕಲ್ಲು, ಮಣ್ಣು ಇವುಗನ್ನೊಳಗೊಂಡಿರುವ ಶಿಲಾವಸ್ತು ಗುರುತ್ವಾಕರ್ಷಣೆಗೆ ಒಳಪಟ್ಟು ಪ್ರವಾಹದಂತೆ ಕೆಳಗೆ ಉರುಳಿ ಊರೂರನ್ನೆ ನಾಶಮಾಡಿಬಿಡುತ್ತದೆ.

	ಹೀಗೆ ಭೂಮಿಯ ಮೇಲಿನ ಶಿಲೆಗಳು ಕ್ಷಯಿಸುವುದಕ್ಕೂ ಅವು ನಾನಾತರದ ಆಕೃತಿಗಳನ್ನು ಹೊಂದುವಂತೆ ಮಾಡುವುದಕ್ಕೂ ಬಹಿರ್ಜನಿತ ಬಲಗಳು ಮುಖ್ಯ ಕಾರಣ.
(ಬಿ.ಪಿ.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ